ಜನಪದ ಮೋಡಿಕಾರರು -
ಮಂತ್ರತಂತ್ರಗಳಿಂದ ಎದುರಾಳಿಯ ಕೈ ಕಟ್ಟುವುದು, ಗೆಲ್ಲುವುದು ಮೋಡಿವಿದ್ಯೆ. ಮಾಟ ಮಂತ್ರ ಎಂದೂ ಇದನ್ನು ಇಂದಿಗೂ ನೋಡಬಹುದಾಗಿದೆ. ಹಿಂದಿನ ಕಾಲದಲ್ಲಿ ಮೋಡಿಕಾರರನ್ನು ಬೇರೆ ಊರಿನವರು ಆಮಂತ್ರಣ ಕೊಟ್ಟು ಕರೆಸಿ ಪ್ರದರ್ಶನ ಏರ್ಪಡಿಸಿ, ಪುರಸ್ಕಾರವಿತ್ತು ಪ್ರೋತ್ಸಾಹಿಸುತ್ತಿದ್ದರು.

ಮೋಡಿಗಳಲ್ಲಿ ರಾಜಮೋಡಿ, ರಣಮೋಡಿ ಎಂದು ಎರಡು ವಿಧ, ಸಂತೋಷದಿಂದ ವಿನೋದಕ್ಕಾಗಿ ಮಾಡುವುದು ರಾಜಮೋಡಿ; ಜಿದ್ದಾಜಿದ್ದಿನಿಂದ ಪಣ ಇಟ್ಟು ಆಡುವುದು ರಣಮೋಡಿ.

ಮೋಡಿಕಾರರ ಗುಂಪುಗಳಲ್ಲಿ ಕರ್ನಾಟಕದಲ್ಲಾದರೆ ಗಾಡುಗರು, ವಿಶ್ವಕರ್ಮದವರು, ಕಂಚಿಗೊಲ್ಲರು, ದೇವಾಂಗಶೆಟ್ಟರು; ಆಂಧ್ರಪ್ರದೇಶದಲ್ಲಾದರೆ ಪೆದ್ದಟ್ಟಿಗೊಲ್ಲರು ಮುಂತಾದ ಮತಸ್ಥರು ಇರುತ್ತಾರೆ. ಇವರಲ್ಲಿ ಕೆಲವರು ತಂತಮ್ಮ ಊರುಗಳಲ್ಲಿ ಸ್ಥಿರವಾಗಿ ವಾಸವಾಗಿರುತ್ತಾರೆ; ಕೆಲವರು ಮಾತ್ರ ಯಾವಾಗಲೂ ದೇಶಸಂಚಾರದಲ್ಲೇ ಇರುತ್ತಾರೆ.

ಮೋಡಿ ಆಟಕ್ಕೆ ಮುನ್ನ, ಅದಕ್ಕೆಂದು ಗೊತ್ತುಮಾಡಿದ ಸ್ಥಳದಲ್ಲಿ ಮಂಡಲಗಳನ್ನು ಬರೆಯುತ್ತಾರೆ. ಇಂಥ ಮಂಡಲಗಳು ಮೂರರಿಂದ ಇಪ್ಪತ್ತೆರಡರವರೆಗೆ ಇರುವುದು ವಾಡಿಕೆ, ಒಂದೊಂದು ಮಂಡಲದಲ್ಲೂ ಕೋಳಿಮೊಟ್ಟೆ, ನಿಂಬೆಹಣ್ಣು, ಪೊರಕೆ, ದೊಣ್ಣೆ ಇಂಥ ಒಂದೊಂದು ವಸ್ತುವನ್ನು ಇರಿಸುತ್ತಾರೆ. ಕೊನೆಯ ಮಂಡಲದ ನಡುವೆ ಒಂದು ಗುಂಡಿಯಲ್ಲಿ ಹಣದ ಗಂಟನ್ನು ಇಟ್ಟು ಅದರ ಎರಡೂ ಪಕ್ಕದಲ್ಲಿ ಎರಡು ಚಪ್ಪಡಿಕಲ್ಲುಗಳನ್ನು ಇರಿಸುತ್ತಾರೆ.

ಇಷ್ಟೆಲ್ಲ ಸಿದ್ಧತೆಗಳನ್ನು ಮಾಡಿದ ಮೇಲೆ, ಮೋಡಿಹಾಕುವವ ಅಕ್ಷತೆಕಾಳನ್ನು ಮಂತ್ರಿಸಿ ಎದುರು ಗುಂಪಿನವರ ಮೇಲೆ ಎಸೆಯುತ್ತಾನೆ. ಆ ಕ್ಷಣ ಅವರು ತಲೆ ಕೆಳಗಾಗಿ ಅಲ್ಲಿದ್ದ ಮರದಲ್ಲಿ ನೇತಾಡುವಂತಾಗುತ್ತಾರೆ. ಆಗ ಆ ಗುಂಪಿನ ಒಬ್ಬ ಹೆಂಗಸು ಅದೇ ಅಕ್ಷತೆ ಕಾಳನ್ನು ಎದುರು ಪಕ್ಷದ ಮೋಡಿಕಾರನ ಮೇಲೆ ಎಸೆದು ತನ್ನ ಕಡೆಯವರನ್ನು ಮರದಿಂದ ಬಿಡಿಸುತ್ತಾಳೆ. ಅನಂತರ ಅವರೆಲ್ಲ ಮಂಡಲದಾಟಲು ಪ್ರಯತ್ನಿಸುತ್ತಾರೆ. ಮೋಡಿಕಾರ ಮತ್ತೆ ಮಂತ್ರದ ಅಕ್ಷತೆಯನ್ನು ಅವರೆಲ್ಲರ ಮೇಲೆ ಎಸೆಯುತ್ತಾನೆ. ಆಗ ಅವರು ರಕ್ತ ಕಾರಿ ಒದ್ದಾಡುತ್ತಾರೆ. ಆಗ ಅವರ ಕಡೆಯ ಹೆಂಗಸು ನಿಂಬೆಹಣ್ಣು ಮಂತ್ರಿಸಿ ಅವರ ಮೇಲೆ ಎಸೆದು ಅವರ ಕಟ್ಟು ಬಿಡಿಸುತ್ತಾಳೆ. ಮತ್ತೆ ಅವರು ಮುನ್ನುಗ್ಗುತ್ತಾರೆ. ಕೂಡಲೆ ಮುಂದಲ ಮಂಡಲದಲ್ಲಿ ಇರಿಸಿರುವ ಪೊರಕೆ ಎದ್ದುನಿಂತು ತನ್ನನ್ನು ಮುಟ್ಟಲು ಬಂದವರನ್ನು ಬಡಿಯಲು ಪ್ರಾರಂಭಿಸುತ್ತದೆ. ಹೀಗೆ ಮಂತ್ರ ಪ್ರತಿಮಂತ್ರಗಳು ನಡೆಯುತ್ತವೆ. ಎದುರಾಳಿಗಳು ಎಲ್ಲವನ್ನೂ ಗೆದ್ದು ಕೊನೆಯ ಮಂಡಲಕ್ಕೆ ಬಂದು ಹಣದ ಗಂಟಿಗೆ ಕೈಹಾಕಬೇಕು. ಆಗಲೂ ಅಕ್ಕಪಕ್ಕದಲ್ಲಿರುವ ಚಪ್ಪಡಿಕಲ್ಲುಗಳು ಅವರ ಕೈಗಳನ್ನು ಜಜ್ಜುತ್ತವೆ. ಅಲ್ಲಿ ಯಾರ ಕೈಗೆಲ್ಲುತ್ತದೋ ಅವರು ನಿಜವಾಗಿ ಗೆದ್ದಂತೆ. ಹಣದ ಗಂಟಿಗೆ ಬದಲಾಗಿ ಕುರಿಯನ್ನೋ ಇಲ್ಲವೆ ಕೋಳಿಯನ್ನೋ ಪಣವಾಗಿ ಇರಿಸುವುದುಂಟು. ರಣಮೋಡಿ ಇದಕ್ಕಿಂತ ಭೀಕರವಾಗಿರುತ್ತದೆ. ಈ ಆಟದವರು ಕ್ಷುದ್ರದೇವಿಯ ಆರಾಧಕರಾಗಿರುತ್ತಾರೆ. ಬಲಿಕೊಡುವುದೇ ಮೊದಲಾದ ವಾಮಾಚಾರಗಳಿಂದ ಇವರಿಗೆ ಮಾರಕಶಕ್ತಿ ಬಂದಿರುತ್ತದೆ.

ಗಾಡುಗರು ಎಂಬ ಒಂದು ಮೋಡಿಕಾರ ಪಂಗಡದವರು ವಿಶ್ವಕರ್ಮ ಜನಾಂಗದ ಮೋಡಿಕಾರರನ್ನು ಕಂಡರೆ ಕೊಂಚ ದಿಗಿಲುಪಡುತ್ತಾರಂತೆ. ಏಕೆಂದರೆ ಇವರು ಕೂತವರನ್ನು ಕೂತಸ್ಥಳದಿಂದ ಮೇಲಕ್ಕೆ ಏಳದಂತೆ ಮಾಡುವ ಮೋಡಿ ವಿದ್ಯೆಯಲ್ಲಿ ಪ್ರಸಿದ್ಧರಂತೆ. ಈ ರೀತಿ ಮಾಡಿದಾಗ ಎದುರು ಗುಂಪಿನವರು ಒಂದು ಕಡ್ಡಿಯನ್ನು ಮಂತ್ರಿಸಿ ಬಿಟ್ಟಾಗ ಅದು ದುಂಬಿಯಂತೆ ಹಾರಿಕೊಂಡು ಹೋಗಿ ಎದುರಾಳಿಯನ್ನು ಪತ್ತೆಹಚ್ಚಿ ಕರೆತರುವುದಲ್ಲದೆ ನೆಲಕ್ಕೆ ಅಂಟಿಕೊಂಡವನನ್ನು ಬಿಡಿಸುತ್ತಿತ್ತಂತೆ. ರಣಮೋಡಿಯಲ್ಲಿ ಉಭಯ ಪಕ್ಷದವರಲ್ಲಿ ಕೆಲವರು ರಕ್ತ ಕಾರಿ ಸತ್ತುಹೋದ ನಿದರ್ಶನಗಳೂ ಉಂಟು.

ಈಗಲೂ ದಕ್ಷಿಣ ಕನ್ನಡದ ಕೆಲವು ಪ್ರದೇಶಗಳಲ್ಲಿ ಉತ್ತರ ಕನ್ನಡದ ಪ್ರದೇಶಗಳಲ್ಲಿ ಮಂತ್ರ ಕಟ್ಟಿಸುವ, ಮಾಟಮಾಡಿಸುವ ಆಚರಣೆಗಳು ರೂಢಿಯಲ್ಲಿವೆ. ವ್ಯಾಜ್ಯಗಳಲ್ಲಿ ಎದುರು ಪಕ್ಷದವರನ್ನು ತೀರಿಸಿ ಬಿಡುವ ಉದ್ದೇಶದಿಂದ ಇಂಥ ಕೆಲಸಕ್ಕೆ ಮನುಷ್ಯ ಕೈಹಾಕುತ್ತಾನೆ. ಒಂದು ಕಾಲಕ್ಕೆ ಮನೋರಂಜನೆಯ ಆಟವಾಗಿದ್ದ ಮೋಡಿವಿದ್ಯೆ ಕ್ರಮೇಣ ಮಾರಕ ಹೂಟವಾಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಈಗಲೂ ರಸ್ತೆ ಬದಿಯ ಜಾದುಗಾರರು ನಿರ್ಜೀವ ವಸ್ತುಗಳಾದ ಪೊರಕೆ, ಒನಕೆ, ಬೀಡಿಗಳು ಮುಂತಾದವು ಎದ್ದು ಕುಣಿಯುವಂತೆ ಮಾಡುತ್ತಾರೆ. ಬಗೆಬಗೆಯ ಕಣ್ಣುಕಟ್ಟು ವಿದ್ಯೆಗಳನ್ನು ಮಾಡುತ್ತಾರೆ. ಪ್ರೋತ್ಸಾಹವಿಲ್ಲದೆ ಅಳಿದು ಹೋಗುತ್ತಿರುವ ಮೋಡಿವಿದ್ಯೆಯನ್ನು, ಮೋಡಿಕಾರರ ಜೀವನವನ್ನು ಆದಷ್ಟು ಬೇಗೆ ಶಾಸ್ತ್ರೀಯವಾಗಿ ಅಭ್ಯಾಸಮಾಡವುದು ಒಳ್ಳೆಯದು. 											(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ